ಗ್ರಾಮೀಣ ಸಂಪ್ರದಾಯ

ಪಟ್ಟಣ ಸಂಸ್ಕøತಿಗೂ ಗ್ರಾಮೀಣ ಸಂಸ್ಕøತಿಗೂ ಇರುವ ಭೇದವನ್ನೂ ಸ್ಫುಟವಾಗಿ ನಿರೂಪಿಸುವುದು ಗ್ರಾಮೀಣ ಸಂಪ್ರದಾಯದ (ಪ್ಯಾಶ್ಚೊರಲ್ ಕನ್‍ವೆನ್ಷನ್) ಮೇಲೆ ವಿರಚಿಸಿದ ಸಾಹಿತ್ಯದ ಮುಖ್ಯ ಕುರುಹು: ಮೊದಲಿನಿಂದಲೂ ಬದಲಾಯಿಸದೇ ಬಂದಿರುವ ಕುರುಹು. ಆದರೂ ಆ ಸಾಹಿತ್ಯ ಜನಪದ ಸಾಹಿತ್ಯವಲ್ಲ. ಹಳ್ಳಿಗಾಡಿನ ಕವಿ ಹಳ್ಳಿಯವರ ಬಾಳನ್ನು ಯಥಾಮತಿ ಚಿತ್ರಿಸಿದ ಕವನವಲ್ಲ. ನಗರವಾಸಿಯಾದ ವಿದ್ಯಾವಂತ ಲೇಖಕ ನಗರೇತರ ಮಂದಿಯ, ಮುಖ್ಯವಾಗಿ ಕುರಿಗಾಹಿಗಳ ಜೀವನ ಹೇಗೆ ಸರಳ ನಿಷ್ಕಪಟ ಸುಂದರ ಮತ್ತು ಹರ್ಷಕರ ಎಂಬುದನ್ನು ಭಾವಿಸಿಕೊಂಡು ಅದನ್ನು ಆದರ್ಶವೋ ಎಂದು ಕಾಣಿಸುವ ರೀತಿಯಲ್ಲಿ ಕಥನಗೈದಲ್ಲಿ ಗ್ರಾಮೀಣ ಸಂಪ್ರದಾಯವೆನಿಸಿಕೊಳ್ಳುತ್ತದೆ. ಅದರ ಜನಕ ಕ್ರಿ.ಪೂ. 270ರಲ್ಲಿ ಉಚ್ಫ್ರಾಯದಲ್ಲಿದ್ದ ಪ್ರಾಚೀನ ಗ್ರೀಕ್ ಕವಿ ಥಿಯೋಕ್ರಿಟಸ್ ಅಲೆಗ್ಸಾಂಡರನ ಉತ್ತರಾಧಿಕಾರಿಗಳಾದ ಟಾಲಮೀ ರಾಜವಂಶಕ್ಕೆ ರಾಜಧಾನಿಯಾದ ಅಲೆಗ್ಸಾಂಡ್ರಿಯ ಮಹಾಪಟ್ಟಣ ಥಿಯೋಕ್ರಿಟಸ್ಸನ ವಾಸಕ್ಷೇತ್ರ. ಅವನು ತನ್ನ ಬಾಲ್ಯವನ್ನು ಸಿಸಿಲಿಯ ಕಾಸ್ ದ್ವೀಪದಲ್ಲಿ ಕಳೆದಿದ್ದ. ಅಲ್ಲಿನ ಕುರಿಹಿಂಡುಗಳೂ ಕುರುಬರೂ ಅವನ ನೆನಪಿನಿಂದ ಎಂದೂ ಕಳಚಿಹೋಗಲಿಲ್ಲ. ಪ್ರಕೃತಿಯ ರಮ್ಯತೆಯಂತೂ ತಿರುತಿರುಗಿ ಅವನಿಗೆ ಸಂತಸವನ್ನು ಪುನಃಪರಿಚಯದ ಆಶೆಯನ್ನೂ ತರುತ್ತಿತ್ತು. ನಗರವಾಸದಲ್ಲಿದ್ದ ಅವನು ದೂರದ ಸಿಸಿಲಿ ಹಳ್ಳಿಗಾಡಿನ ಬದುಕನ್ನು ಸುವರ್ಣ ಯುಗದ ಬದುಕೆಂದು ಬಗೆದ. ಅದರ ಮೇಲಣ ಗೀಳಿಗೆ ಪಕ್ಕಾದ. ಉಳಿದು ಬಂದಿರುವ ಅವನ ಹತ್ತು ಚಿಕ್ಕ ಕಾವ್ಯಗಳಲ್ಲಿ ಆರು ಆ ಗೀಳನ್ನು ಪ್ರದರ್ಶಿಸುತ್ತ ದುಗುಡವನ್ನು ತೋಡಿಕೊಳ್ಳುವ ಕೃತಿಗಳು. ಅವುಗಳ ಹಿರಿಯ ಲಕ್ಷಣ ಯಥಾರ್ಥತೆಯನ್ನೂ ಆದರ್ಶತ್ವವನ್ನೂ ಸಮಂಜಸವಾಗಿ ಸಮನ್ವಯಗೊಳಿಸಿರುವುದು. ಅವನಲ್ಲಿರುವಷ್ಟು ನೇರ ಸಹಜತೆ ಅವನ ತರುವಾಯ ಬಂದವರಲ್ಲಿ ಗೋಚರಿಸುವುದಿಲ್ಲ. ಅವರ ರಚನೆಯಲ್ಲಿ ರಮಣೀಯತೆ ಹೆಚ್ಚಾಗಿರಬಹುದು, ಆದರೆ ಕೃತಕತೆಯೂ ಹೆಚ್ಚು.

ಥಿಯೋಕ್ರಿಟಸ್ ನಾಲ್ಕು ಬಗೆಯ ಕಾವ್ಯಪ್ರಕಾರಗಳನ್ನು ಸತ್ತ್ವಯುಕ್ತವಾಗಿ ಕಟ್ಟಿ ರೂಢಿಗೆ ತಂದ.

1 ಹಾಡಿನ ಸ್ಪಧರ್ಸೆ: ಇಬ್ಬರು ಕುರುಬರು ಸಂಧಿಸುತ್ತಾರೆ, ಅದೂ ಇದೂ ಮಾತುಕಥೆ ನಡೆದು ತಮ್ಮಿಬ್ಬರಲ್ಲಿ ಕವನಕೌಶಲ ಯಾರಿಗೆ ಅಧಿಕ ಎಂಬ ಚರ್ಚೆ ಏಳುತ್ತದೆ. ಮೂರನೆಯ ಗೆಳೆಯನೊಬ್ಬನನ್ನು ಹುಡುಕಿ ತಂದು. ಅವನೆದುರಿಗೆ ತಮ್ಮ ತಮ್ಮ ಆಶುಕವಿತೆಯನ್ನು ವಾಚನ ಮಾಡುತ್ತಾರೆ. ಅವನು ಮೇಲೊ ಇವನು ಮೇಲೊ ನಿರ್ಧರಿಸಲಾರದೆ ನಿಲ್ಲುತ್ತಾನೆ. ನ್ಯಾಯಮೂರ್ತಿ ಕುರಿಗಾಹಿ ಸ್ಪರ್ಧಿಗಳು ತಾವಿಟ್ಟಿದ್ದ ಪಣಗಳನ್ನು ಅದಲುಬದಲು ಮಾಡಿಕೊಂಡು ಮಿತ್ರನನ್ನು ವಂದಿಸಿ ತೃಪ್ತಿಯಿಂದ ತೆರಳುತ್ತಾರೆ.

2 ಕುರಿಗಾಹಿಯೊಬ್ಬ ನಿರ್ಜನ ಪ್ರದೇಶದಲ್ಲಿ ಕುಳಿತು ತನ್ನ ಪ್ರೇಯಸಿಯ ಲಾವಣ್ಯವನ್ನೂ ಆಕರ್ಷತೆಯನ್ನೂ ಹೊಗಳಿ, ಅವಳ ಔದಾಸೀನ್ಯದಿಂದ ತನಗಾಗಿರುವ ದುಃಖವನ್ನು ವಿಧವಿಧವಾಗಿ ನಿವೇದಿಸುತ್ತಾನೆ. ಸಹಾನುಭೂತಿ ಕೋರುತ್ತಾನೆ. ಇಷ್ಟೇ ಆ ಕಿರುಕಾವ್ಯವಾಗಬಹುದು. ಅಥವಾ ಅದನ್ನು ತಾನು ಮರೆಯಲ್ಲಿ ನಿಂತು ಆಲಿಸಿದಂತೆ ಇನ್ನೊಬ್ಬ ವರದಿಗೈಯಬಹುದು.

3 ಗ್ರಾಮೀಣ ಶೋಕಗೀತ: ಇದು ಗ್ರಾಮೀಣ ಸಂಪ್ರದಾಯದ ಸಾಹಿತ್ಯದಲ್ಲೆಲ್ಲ ಬಹಳ ಬಳಕೆಯ ಕಾವ್ಯಪ್ರಭೇದ. ಹೆಚ್ಚು ಪುರಸ್ಕಾರವನ್ನು ಗಳಿಸಿದ ಕೃತಿರಚನೆ. ಥಿಯೋಕ್ರಿಟಸ್ಸನ ಅಮರ ಕೀರ್ತಿಗೆ ಅದೊಂದೇ ಸಾಕು. ಅವನು ಬರೆದ ಡ್ಯಾಫ್ನಿಸ್ಸಿಗಾಗಿ ರೋದನ ಎಂಬುದು ಯೂರೋಪಿನ ಕವಿಗಳಿಗೆ ವಿಪರೀತ ಮೋಹಕವಾಯಿತು, ಮಾದರಿಯಾಯಿತು. ಡ್ಯಾಫ್ನಿಸ್ ದೇವದೂತ ಹರ್ಮಿಸನ ಕುಮಾರ. ಸಿಸಿಲಿಯಲ್ಲಿ ಆಡುಕುರಿ ಪಾಲಿಸುತ್ತ ಇದ್ದ. ಅಪ್ಸರೆಯೊಬ್ಬಳಿಗೆ ಅವನ ಮೇಲೆ ಮನಸ್ಸಾಯಿತು. ಅವನಾದರೊ ಪ್ರೇಮದ ವೈರಿ. ಅವನ ಅಲಕ್ಷ್ಯವನ್ನು ಕಂಡು ಪ್ರೇಮ ದೇವಿ ಆಫ್ರೊಡೈಟಿ ಕ್ರುದ್ಧಳಾಗಿ, ಅವನ ಕಣ್ಣನ್ನು ಇಂಗಿಸಿಬಿಟ್ಟಳು. ಅಲ್ಲದೆ ಯಾವುದೊ ಕೈಗೆ ಎಟುಕದ ಮಬ್ಬು ಪದಾರ್ಥಕ್ಕಾಗಿ ಅವನು ತೊಳಲಿ ಪರದಾಡುವಂತೆ ಶಾಪ ಕೊಟ್ಟಳು. ಪರಿತಪಿಸಿ ಬಳಲಿ ಬೆಂಡಾಗಿ ಡ್ಯಾಫ್ನಿಸ್ ಸತ್ತುಹೋದ. ಅವನೇ ಶೋಕಗೀತದ ಪೌರಣಿಕ ಮೂಲವೆಂದು ಪ್ರಾಚೀನರ ನಂಬಿಕೆ. ಅಂತೂ ಥಿಯೋಕ್ರಿಟಸ್ಸನ ಡ್ಯಾಫ್ನಿಸ್ ಕವನ ಕಥಾವಸ್ತು, ಕಥನಮಾರ್ಗ, ಸಂವಾದಕ್ರಮ, ಉಪದೇವಿಯರಿಗೆ ಆಹ್ವಾನ, ನದಿ ಮರ ಗಾಳಿ ಮುಂತಾದವಕ್ಕೆ ಜೀವ ತುಂಬುವ ರಾಗಮಿಥ್ಯೆ (ಪೊಯೆಟಿಕ್ ಫ್ಯಾಲಸಿ) ಕಾವ್ಯ ಭಾಷೆ, ಪಂಕ್ತಿಗಳ ಪುನರುಕ್ತಿ ಎಲ್ಲದರಲ್ಲೂ ಅನುಲ್ಲಂಫನೀಯ ಸೂತ್ರವಾಯಿತು, ಮೇಲ್ಪಂಕ್ತಿಯಾಯಿತು. ಬಯನ್, ಮಾಸ್ಕಸ್, ವರ್ಜಿಲ್, ಪೆಟ್ರಾರ್ಕ್, ಮಿಲ್ಟನ್, ಷೆಲ್ಲಿ, ಆರ್ನಲ್ಡ್ ಇತ್ಯಾದಿ ಅನೇಕ ಪ್ರಖ್ಯಾತ ಕವಿಗಳು ಆ ಸಂಪ್ರದಾಯದ ಅನುಯಾಯಿಗಳು.

4 ಅನ್ಯಾರ್ಥ ಕವನ: ಸಮಕಾಲೀನ ಸಾಹಿತಿಗಳಲ್ಲಿ ಕೆಲವರಿಗೆ ಗುಪ್ತನಾಮವನ್ನಿಟ್ಟು ತನ್ನೊಂದು ಕಿರುಕಾವ್ಯದಲ್ಲಿ ಥಿಯೋಕ್ರಿಟಸ್ ಅವರು ವ್ಯವಹರಿಸುವಂತೆ ಅನ್ಯಾರ್ಥ ನೇಮವನ್ನೂ ಗ್ರಾಮೀಣ ಸಂಪ್ರದಾಯಕ್ಕೆ ತಂದು ಸೇರಿಸಿದ. ಕುರಿಗಾಹಿ=ಕವಿ, ಕೊಳಲು ದನಿ=ಕವಿತ್ವ, ಕಾಡುಮೇಡಿನಲ್ಲಿ ಸಂಚಾರ = ಕವಿ ವೃತ್ತಿ, ಬುಗ್ಗೆಯಿಂದ ನೀರುಕ್ಕುವಿಕೆ=ಕಾವ್ಯಸ್ಫೂರ್ತಿ-ಹೀಗೆ ಒಂದು ಬಗೆಯ ಸಂಕೇತ ಭಾಷೆ ಬೆಳೆದು ಕ್ರಮೇಣ ವಿಶ್ವಗ್ರಾಹ್ಯವಾಯಿತು.
ಗ್ರಾಮೀಣ ಸಂಪ್ರದಾಯದ ಗ್ರಾಮೀಣತೆಯನ್ನು ಹಿಂಬದಿಯಲ್ಲಿ ಇಟ್ಟು, ಕಲಾಗುಣವನ್ನು ಪುಟಕ್ಕೆ ಹಾಕಿ ಕಮನೀಯವಾಗಿಸಿ, ಅತ್ಯುತ್ಕøಷ್ಟ ಕಾವ್ಯಮರ್ಯಾದೆಯ ಗೌರವವನ್ನಿತ್ತು, ಹೆಚ್ಚು ಮಾಡಿದ ಯಶಸ್ಸು ಭವ್ಯಕವಿ ವರ್ಜಿಲನಿಗೆ ಸಲ್ಲತಕ್ಕದ್ದು. ವರ್ಜಿಲ್ ಹಳ್ಳಿಗರೊಂದಿಗೆ ಬೆಳೆದವನಲ್ಲ; ಹಳ್ಳಿಗಾಡು ಜೀವನದ ವಾಸ್ತವಿಕ ಆಗುಹೋಗುಗಳಿಂದ ಅಚ್ಚರಿಗೊಂಡವನಲ್ಲ. ಆದರೂ ಥಿಯೋಕ್ರಿಟಸ್ಸನಲ್ಲಿ ಸೂಚಿತವಾದ ಆದರ್ಶ ಗ್ರಾಮಾಂತರ ಜೀವನ ಅವನ ಕವಿಚಿತ್ತವನ್ನು ಅಪಹರಿಸಿತು. ಅವನ ಎಕ್ಲೊಗ್‍ಗಳಲ್ಲಿ (ಆಯ್ದ ಕವನ) ಅಂದಚಂದದ ಸುವರ್ಣಯುಗವೂ ಸ್ವರ್ಗಸಮಾನವಾದ ಸೌಖ್ಯದ ಬೀಡೂ ಅನುಪಮ ಕಲಾವಂತಿಕೆಯಿಂದ ಚಿತ್ರಿತವಾಗಿವೆ. ಸೂಕ್ತ ಶಬ್ದ, ಗಾಢಾರ್ಥ, ತುಂಬು ಧ್ವನಿ, ನಾದ ಮಾಧುರ್ಯ, ಛಂದೋವೈವಿಧ್ಯ ಎಲ್ಲದರಲ್ಲೂ ವರ್ಜಿಲ್ ಎತ್ತಿದ ಕೈ. ಮಧ್ಯಯುಗದ ಪೂರ್ತವೂ ಹೊಸಹುಟ್ಟಿನ ಪ್ರಾರಂಭಕಾಲದಲ್ಲೂ ಗ್ರಾಮೀಣ ಸಂಪ್ರದಾಯಕ್ಕೆ ವರ್ಜಿಲನೇ ಮಾದರಿ.
ಮಧ್ಯಯುಗದ ಫ್ರಾನ್ಸಿನಲ್ಲಿ ಪ್ಯಾಸ್ಟುರೆಲ್ ಎಂಬ ಕೊಂಚ ನಾಟಕೀಯ ಭಾವಗೀತೆ ಪ್ರಕಾಶಗೊಂಡಿತು. ಅದರಲ್ಲಿ ಎರಡು ಪಾತ್ರಗಳ ಸಮಾಗಮವೂ ಘರ್ಷಣೆಯೂ ಕಥಾವಸ್ತು, ಒಬ್ಬ ಸಂಚಾರಿ ವೀರ ಅಕಸ್ಮಾತ್ ಒಬ್ಬ ಕುರುಬಿತಿಯನ್ನು ಸಂಧಿಸುತ್ತಾನೆ. ಅವಳ ತಾರುಣ್ಯ ರೂಪ ಬೆಡಗುಗಳಿಗೆ ಮನಸೋತು ಪ್ರಣಯಭಿಕ್ಷೆ ಬೇಡುತ್ತಾನೆ. ಪರಿಣಾಮ ಬೇರೆ ಬೇರೆ ತರವಾಗಿದೆ. ಬೇರೆ ಬೇರೆ ಪ್ಯಾಸ್ಟುರೆಲ್‍ಗಳಲ್ಲಿ ಅವನ ಪುರುಷಗಾಡಿಗೂ ಪರಿಷ್ಕøತ ಮಾತುಗಾರಿಕೆಗೂ ಹಳ್ಳಿಯ ಹುಡುಗಿ ಬೆರಗಾಗಿ ಅಭೀಷ್ಟವನ್ನು ಆಮೋದದಿಂದ ಸಲ್ಲಿಸುತ್ತಾಳೆ. ಅಥವಾ ವೀರ ದುರುಳನಾಗಿ ಅವಳ ನಿರೋಧವನ್ನು ಮುರಿದಿಕ್ಕಿ ಅವಳನ್ನು ಬಲಾತ್ಕರಿಸುತ್ತಾನೆ. ಅಥವಾ ಹಾಗೆ ಅವನ ದಬ್ಬಾಳಿಕೆ ನಡೆಸಲಿರುವಾಗ ದನಗಾಹಿ ಕುರಿಗಾಹಿಗಳು ಓಡಿಬಂದು ಮೇಲೆರಗಿ ಅವನನ್ನು ಆಚೆ ದೂಡುತ್ತಾರೆ. ಕುರುಬಿತಿಯ ಶೀಲ ಉಳಿಯುತ್ತದೆ. ಅಥವಾ ಅವಳು ತನ್ನ ವಿಶೇಷ ಜಾಣ್ಮೆಯಿಂದ ಪ್ರಶ್ನೋತ್ತರ ಉಪಾಖ್ಯಾನ ಮುಂತಾದ ಉಪಾಯ ಹೂಡಿ ಆತ ಸೋತುಹೋಗಿ ನಾಚಿಕೆಯಿಂದ ತನ್ನ ಗೊಡವೆಗೆ ಬಾರದೆ ಕಣ್ಮರೆಯಾಗುವಂತೆ ಎಸಗಿ ಗೆಲ್ಲುತ್ತಾಳೆ.

ದಶಕಗಳು ಕಳೆದ ಮೇಲೆ ಕಥಾನಾಯಕಿಯ ಜಾತಿಕಸಬನ್ನು ಪ್ಯಾಸ್ಟುರೆಲ್ ಬದಲಾಯಿಸುತ್ತ ನಡೆಯಿತು. ಕುರಿಕಾಯುವ ಯುವತಿಯೇ ಪ್ರಧಾನವಾಗಿದ್ದರೂ ಕೆಲವೊಮ್ಮೆ ಆಡು ಕಾಯುವವಳೂ ವರಟೆ ಕಾಯುವವಳೂ ಹಂದಿ ಕಾಯುವವಳೂ ತೋಟಗಾತಿಯೂ ಗೋಪಾಲಕಳೂ ನಾಯಕಿಯರಾಗುತ್ತಾರೆ. ಆದರೆ ಇವಾವವೂ ಹೆಚ್ಚಾಗಿ ಪ್ರಚಾರಗೊಳ್ಳಲಿಲ್ಲ. ಗ್ರಾಮೀಣ ಸಂಪ್ರದಾಯಕ್ಕೂ ಕುರುಬವೃತ್ತಿಗೂ ನಿಕಟ ಬಾಂಧವ್ಯ ಅಚ್ಚಳಿಯದೇ ನಿಂತಿಬಿಟ್ಟಿತು.
ಹೊಸಹುಟ್ಟಿನ ಅವಧಿಯಲ್ಲಿ ಸಂಪ್ರದಾಯ ದೇಶ ದೇಶದ ದೊಡ್ಡ ಕವಿಗಳಿಗೆ ಅತ್ಯಾಕರ್ಷಕವಾದದ್ದೇ ಅಲ್ಲದೆ ಹೊಸ ಆಕಾರಗಳನ್ನೂ ಪಡೆಯಿತು. 1504ರಲ್ಲಿ ಇಟಲಿಯ ಸ್ಯಾನ್ನಸಾರೊ ಎಂಬ ಕವಿ ಗದ್ಯ ಪದ್ಯ ಮಿಶ್ರಿತವಾದ ಒಂದು ಗ್ರಾಮೀಣ ಅಚ್ಚರಿಕಥೆಯನ್ನು ಬರೆದು ಆರ್ಕೇಡಿಯ ಎಂಬ ಅಂಕಿತವಿಟ್ಟು ಅದನ್ನು ಪ್ರಕಟಿಸಿದ. ಆರ್ಕೇಡಿಯ ಪುರಾತನ ಗ್ರೀಸಿನ ಒಂದು ಗುಡ್ಡಗಾಡು. ಅದರ ವಿಚಾರವಾಗಿ ರೋಮನರೂ ಇತರ ಆಧುನಿಕರೂ ಕೆಲವು ಕಾಲ್ಪನಿಕ ಅಭಿಪ್ರಾಯಗಳನ್ನು ಬೆಳೆಸಿಕೊಂಡು, ಅದೊಂದು ಸರಳತೆ ಸಮಾಧಾನ ಸೌಖ್ಯಗಳ ಮಾದರಿ ನಾಡೆಂದು ನಂಬುತ್ತ ಬಂದರು. ಅದ್ಭುತ ಕಥೆಯ ಸುರಿಮಳೆ ಪ್ರಾರಂಭವಾಯಿತು. ಪೋರ್ಚುಗಲ್ಲಿನ ಮಾಂಟ್‍ಮೇಯರನ ಡಯನಾ, ಇಂಗ್ಲೆಂಡಿನ ಫಿಲಿಪ್ ಸಿಡ್ನಿಯ ಆರ್ಕೇಡಿಯ, ಫ್ರಾನ್ಸಿನ ಡ ಅರ್ಫೆಯ ಆಸ್‍ಟ್ರೆ ಮೊದಲಾದವು ಸ್ಯಾನ್ನ ಸಾರೊವನ್ನು ಅನುಕರಿಸಿ ರಚಿಸಿದ ಕೃತಿಗಳು. ಸ್ಯಾನ್ನಸಾರೊ ಮಾಡಿದ ಇನ್ನೊಂದು ಗ್ರಾಮೀಣ ಪ್ರಯೋಗ ಅಷ್ಟೇನೂ ಪ್ರಖ್ಯಾತಿ ಪಡೆಯಲಿಲ್ಲ. ಅದು ಮೀಂಗುಲಿಗರಿಗೆ ಸಂಬಂಧ ಪಟ್ಟ ಆಖ್ಯಾನಕ. ಎಲ್ಲೋ ಅಲ್ಲೊಂದು ಇಲ್ಲೊಂದು ಕೃತಿಗೆ ಅದರ ಪ್ರಚೋದನೆ ಒದಗಿತು, ಅಷ್ಟೇ.

ಅಚ್ಚರಿಕಥೆಯಿಂದು ಗ್ರಾಮೀಣ ಸಂಪ್ರದಾಯದ ರೂಪಕವೂ ಒಡೆದುಮೂಡಿದ್ದು ಸಹಜವೆ. 1554ರಲ್ಲಿ ಬೆಕ್ಕರಿ ಎಂಬ ಇಟಲಿಯ ಕವಿಯ ಇಲ್ ಸ್ಯಾಗ್ರಿಫಿಸಿಸಿûಯೊ ಎಂಬ ಗ್ರಾಮೀಣ ರೂಪಕ ಪ್ರದರ್ಶನಕ್ಕೆ ಬಂತು. ಬೆಕ್ಕರಿ ಸಾಧಾರಣ ಲೇಖಕ. ಮಹಾಕವಿಯಾದ ಟ್ಯಾಸೊ 1573ರಲ್ಲಿ ತನ್ನ ಅಮಿಂಟಾ ನಾಟಕವನ್ನು ಆಡಿಸಿದ. ಆ ನಾಟಕಪ್ರಚಾರಕ್ಕೆ ಅವನಿಂದ ಪ್ರೋತ್ಸಾಹವೂ ಪ್ರಶಸ್ತಿಯೂ ಅಷ್ಟಿಷ್ಟಲ್ಲ. ಸ್ಯಾನ್ನಸಾûರೊ ಗ್ರಾಮೀಣ ಅಚ್ಚರಿಕಥೆಗೂ ಟ್ಯಾಸೊ ಗ್ರಾಮೀಣ ರೂಪಕಕ್ಕೂ ಮಾರ್ಗದರ್ಶಿಗಳೂ ಮೇಲ್ಪಂಕ್ತಿಗಳೂ ಆಗಿ ಹೆಸರಾಂತರು. 16ನೆಯ ಶತಮಾನದ ಕಡೆಯ ಇಪ್ಪತ್ತು ಇಪ್ಪತ್ತೈದು ಸಂವತ್ಸರಗಳಲ್ಲಿ ಇಟಲಿಯಲ್ಲಿ ಪ್ರಮುಖವಾಗಿದ್ದ ಕಾವ್ಯ ಪ್ರಭೇದವೆಂದರೆ ಗ್ರಾಮೀಣ ರೂಪಕ. ಅತ್ಯುತ್ತಮ ಕವಿಗಳ ಅತ್ಯುತ್ಕøಷ್ಟ ಕವಿತ್ವ ಮೀಸಲಾಗಿದ್ದದ್ದು ಅದಕ್ಕೇ. ಕ್ರಮೇಣ ಸಂಗೀತವೂ ಅದರ ಒಂದು ಅಂಶವಾದದ್ದರಿಂದ ಅದರ ಕಳೆ ವೃದ್ದಿಯಾಯಿತು.
ಕಿರುಕಾವ್ಯ, ಗದ್ಯಪದ್ಯಮಿಶ್ರಿತ ನೀಳ್ಗಥೆ ನಾಟಕ ಮೂರೂ ಗ್ರಾಮೀಣ ಸಂಪ್ರದಾಯವನ್ನು ಎಲ್ಲೆಲ್ಲೂ ಹರಡಿ ಕಾವ್ಯಾಹ್ಲಾದವನ್ನು ಹರಿಸಿದುವು. ಇಂಗ್ಲೆಂಡಿನ ಎಡ್ಮಂಡ್ ಸ್ಪೆನ್ಸರ್ ಮಹಾಕವಿಗಳಲ್ಲಿ ಉನ್ನತ ಮಟ್ಟದವ. ಅವನ ಗ್ರಾಮೀಣ ಸಂಪ್ರದಾಯದ ಕವಿತೆ ಕುರುಬನ ಪಂಚಾಂಗ ಎಂಬುದು ಈಗಲೂ ಅನ್ಯಾದೃಶ ವೈಭವದಿಂದ ಮೆರೆಯುತ್ತಿದೆ. ಅದರಲ್ಲಿ ವರ್ಷದ ಹನ್ನೆರಡು ಮಾಸಗಳಿಗೂ ಅನ್ವಯಿಸುವ ಹನ್ನೆರಡು ಕಿರುಕಾವ್ಯಗಳಿವೆ. ಸ್ಪೆನ್ಸರ್ ವರ್ಜಿಲನ ಕೃತಕ ಮಾರ್ಗವನ್ನು ತ್ಯಜಿಸಿ ಥಿಯೋಕ್ರಿಟಸ್ಸನ ನಿಜ ಗ್ರಾಮೀಣತೆಯನ್ನು ಅನುಸರಿಸಿದ. ಡೇಮನ್ ಡ್ಯಾಫ್ನಿಸ್, ಅಮಿಂಟಾಸ್ ಮೊದಲಾದ ಗ್ರಾಂಥಿಕ ವ್ಯಕ್ತಿಗಳ ಬದಲು ವಿಲ್ಲೀ, ಕಾಲಿನ್, ಕಡ್ಡೀ ಮುಂತಾದ ವಾಸ್ತವಿಕ ಹಳ್ಳಿಗರನ್ನು ಹೆಸರಿಸಿ, ಅವರ ಕಷ್ಟ ನಷ್ಟ ಅಳಲು ವಿನೋದ ಆಶೆಪಾಶೆಗಳನ್ನು ವಿವರಿಸಿದ. ಅಷ್ಟೇ ಅಲ್ಲದೆ ಒಂದು ಬಗೆಯ ಗ್ರಾಮಾಂತರ ಭಾಷಾವೈಖರಿಯನ್ನೂ ಕಲ್ಪಿಸಿಕೊಂಡು ಅದರಲ್ಲೇ ಪದ್ಯದ ಸೊಬಗನ್ನು ಸಾಧಿಸಿದ. ಅನಂತರ ಬಂದ ಕವಿಗಳಿಗೆ ಇದೆಲ್ಲವೂ ಏನೊ ವೈಪರೀತ್ಯದಂತೆ ತೋರಿತಾಗಿ, ಸ್ಪೆನ್ಸರ್ ಅನುಕರಣೀಯನಾಗಲಿಲ್ಲ. ಫಿಲಿಪ್ ಸಿಡ್ನಿಯ ಸ್ಥಾನ ಗೌರವವೂ ಉದಾತ್ತ ವ್ಯಕ್ತಿ ತೇಜಸ್ಸೂ ಕವಿಲೋಕದ ಆಂತರ್ಯವನ್ನು ಸೂರೆಗೊಂಡವು. ಅವನ ಆರ್ಕೇಡಿಯ ಹಲವಾರು ಗ್ರಾಮೀಣ ಅಚ್ಚರಿಕಥೆಗಳಿಗೆ ಆಧಾರವಾಯಿತು. ಹಾಗೆಯೇ ಕೆಲವು ಗ್ರಾಮೀಣ ರೂಪಕಗಳೂ ಹೊರಬಂದುವು. 17ನೆಯ ಶತಮಾನದ ಭಾವಗೀತೆಯ ಕವಿಗಳಿಗೆ ಹಳ್ಳಿಗಾಡಿನ ಪ್ರಸಂಗ ಕುತೂಹಲಕರವೆನಿಸಿತು. ಅನೇಕ ಕಿರುಕವನಗಳು ಹುಟ್ಟಿದವು. ಹೆರಿಕ್ ಅಂಥ ಕವಿತೆಯಲ್ಲಿ ಮಹಿಮೋನ್ನತನಾದ.

ಗ್ರಾಮೀಣ ಸಂಪ್ರದಾಯಕ್ಕೆ ಅಂಟಿಕೊಂಡಿದ್ದ ಲೌಕಿಕ ಮನೋವೃತ್ತಿ, ಭೋಗಾಪೇಕ್ಷೆ, ಗ್ರಾಮ್ಯತೆ ಮೊದಲಾದ ಲಕ್ಷಣಗಳು ಕೆಲವು ಸಾಹಿತಿಗಳಿಗೆ ಕವಿಶಕ್ತಿಯ ಅಪವ್ಯಯದಂತೆ ಭಾಸವಾಯಿತು. ಕ್ರಮಬದ್ಧ ಕಾವ್ಯವನ್ನು ಬರೆಯುವ ಅಭಿಲಾಷೆಯಿಂದ 17ನೆಯ ಶತಮಾನದಲ್ಲಿ ಕೇಮಸ್ ಡ ಪಾಂತ್ಕರೆ ಎಂಬ ಫ್ರೆಂಚ್ ಪಾದ್ರಿ ಕ್ರಿಸ್ತಮತೀಯ ಗ್ರಾಮೀಣ ಕಿರುಕವಿತೆಗಳನ್ನು ಹೊರತಂದ. 18ನೆಯ ಶತಮಾನದಲ್ಲಿ ಸ್ವಿಟ್ಜರ್ಲೆಂಡಿನ ದೊಡ್ಡ ಸಾಹಿತಿ ಗೆಸ್ನರ್ ಕೂಡ ಮತೀಯ ಗ್ರಾಮೀಣ ಪದ್ಯಗಳನ್ನು ಬರೆದ. ಆದರೆ ಹರ್ಡರ್ ಮುಂತಾದ ಪ್ರಬಲ ಪಂಡಿತರ ಅವಹೇಳನಕ್ಕೆ ಸಿಕ್ಕಿ, ಗ್ರಾಮೀಣ ಸಂಪ್ರದಾಯ ತನ್ನ ಪ್ರಭಾವವನ್ನು ಬೇಗ ಬೇಗ ಕಳೆದುಕೊಳ್ಳುತ್ತ ಹೋಯಿತು. ಅದು ಅಷ್ಟಿಷ್ಟು ರುಚಿವತ್ತಾಗಬೇಕಾದರೆ ರಸಿಕತೆಗೆ ಸರಳತೆಯೂ ಔದಾರ್ಯವೂ ಅತ್ಯಗತ್ಯ. ಸ್ಪಷ್ಟ ವಿಡಂಬನೆಯೆದುರು ಅದು ತಲೆಯತ್ತಿ ನಿಲ್ಲಲಾರದು. ಹೀಗಿದ್ದರೂ ಅದನ್ನು ಒಂದು ಕವಿಸಮಯ ಅಥವಾ ಕಾವ್ಯಾಲಂಕಾರದಂತೆ ಉಪಯೋಗಿಸಿಕೊಳ್ಳುವ ಕವಿಗಳು 19ನೆಯ ಶತಮಾನದಲ್ಲಿ ಹಲವರಾಗಿ ಬಂದರು. 20ನೆಯ ಶತಮಾನದಲ್ಲೂ ಅಂಥವರಿದ್ದಾರೆ. ಹಳೆಯ ಸಂಪ್ರದಾಯವಾದರೂ ಹೊಸತನಕ್ಕೆ ಅದರಲ್ಲಿ ಎಡೆಯುಂಟು. ತನ್ನೊಳಗೆ ಉಕ್ಕಿ ಹೊರಹೊಮ್ಮಲಾಶಿಸುವ ತೀವ್ರಭಾವ ಭಾವನೆಗಳಿಗೆ ತಮ್ಮ ಹೆಸರಿನಲ್ಲೇ ಆಸ್ಪದ ಕೊಡುವುದಕ್ಕೆ ಕೆಲವು ಕವಿಗಳಿಗೆ ಏನೊ ಹಿಂಜರಿಕೆ. ತಮ್ಮ ಸ್ಥಳ ಸನ್ನಿವೇಶದಿಂದ ದೂರವಾದ ವ್ಯಕ್ತಿಯ ಸೋಗು ಅವರಿಗೆ ಬೇಕಾಗಬಹುದು. ನಿಸರ್ಗದ ಮಡಿಲಲ್ಲೇ ಇರುವ ಗ್ರಾಮಾಂತರ ನಿವಾಸಿಯನ್ನು ಕಲ್ಪಿಸಿಕೊಂಡು ಅವನ ಮೂಲಕ ತಮ್ಮ ಅಭಿಪ್ರಾಯಗಳಿಗೆ ಮೂರ್ತತ್ವ ಕೊಡುವುದು ಅಸಹಜವಲ್ಲ. ಬಹುಶಃ ಕಾವ್ಯತತ್ತ್ವರೀತ್ಯ ಅತಾರ್ಕಿಕವೂ ಅಲ್ಲ. ರಾಗಮಿಥ್ಯೆ ಮನುಷ್ಯರಿಗೆ ಒಗ್ಗಿ ಬಂದಿರುವ ರಮ್ಯ ವರ್ತನೆ. ಅಂದಚಂದದ ರಾಗಮಿಥ್ಯೆಯನ್ನು ಗ್ರಾಮೀಣ ಸಂಪ್ರದಾಯದಲ್ಲಲ್ಲದೆ ಮತ್ತೆಲ್ಲಿ ಕಾಣಬಹುದು?			(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ